ನಾನು ಚಿತ್‌ರಿಸಿದ ರಂಗೋಲಿ ಮಿ.ವೆಂ.ಶ್‌ರೀನಿವಾಸ - ನೆನಪಿನಂಗಳದಿಂದ:
ಅದು 1964ನೇ ಇಸವಿ ಇರಬಹುದು. ಆಗ ನಾನು ಬಿ.ಇ.(ಸಿವಿಲ್) ಓದುತ್‌ತಿದ್‌ದೆ ಬೆಂಗಳೂರಿನ ಯೂ.ವಿ.ಸಿ.ಇ. ಕಾಲೇಜಿನಲ್‌ಲಿ. ಅದೇ ಸಮಯದಲ್‌ಲಿ ಸಂಜೆಯ ವೇಳೆಯಲ್‌ಲಿ ಕನ್‌ನಡ ಟೈಪ್‌ರೈಟಂಗ್, ಇಂಗ್‌ಲೀಷ್ ಟೈಪ್‌ರೈಟಿಂಗ್ ಮತ್‌ತು ಇಂಗ್‌ಲೀಷ್ ಶಾರ್‌ಟ್‌ಹ್‌ಯಾಂಡ್ ಕಲಿಯುತ್‌ತಿದ್‌ದೆ - ಬಸವನಗುಡಿಯಲ್‌ಲಿ ಗಾಂಧಿಬಜ಼ಾರಿನ ಸರ್‌ಕಲ್ ಹತ್‌ತಿರದಲ್‌ಲಿದ್‌ದ ಬೆಂಗಳೂರು ವಾಣಿಜ್‌ಯ ವಿದ್‌ಯಾಶಾಲೆಯಲ್‌ಲಿ. ಆ ವಿದ್‌ಯಾಶಾಲೆಯ ವಿದ್‌ಯಾರ್‌ಥಿ ಸಂಘದ ಕಾರ್‌ಯದರ್‌ಶಿಯಾಗಿದ್‌ದೆ. ಆ ವರ್‌ಷದ ವಾರ್‌ಷಿಕೋತ್‌ಸವಕ್‌ಕೆ ಪ್‌ರತಿವರ್‌ಷದಂತೆ ತಮ್‌ಮ ಶಾಲೆಯ ವಿದ್‌ಯಾರ್‌ಥಿಗಳಿಗೆ ವಾರ್‌ಷಿಕ ಕ್‌ರೀಡಾಸ್‌ಪರ್‌ಧೆಗಳನ್‌ನು ಏರ್‌ಪಡಿಸಿದ್‌ದರು. ನಾನು ವಿದ್‌ಯಾರ್‌ಥಿ ಸಂಘದ ಕಾರ್‌ಯದರ್‌ಶಿಯಾಗಿದ್‌ದುದರಿಂದ ವಾರ್‌ಷಿಕೋತ್‌ಸವ ಕುರಿತ ಸಭೆಗೆ ನಾನೂ ಹಾಜರಾಗುತ್‌ತಿದ್‌ದೆ. ಸ್‌ಪರ್‌ಧೆಗೆ ಆರಿಸಲಾಗಿದ್‌ದ ಕ್‌ರೀಡೆಗಳ ಪಟ್‌ಟಿಯನ್‌ನು ನಾನು ನೋಡಿದೆ. ಆ ಪಟ್‌ಟಿಯಲ್‌ಲಿ ರಂಗೋಲಿ ಸ್‌ಪರ್‌ಧೆಯನ್‌ನು ಹೆಣ್‌ಣು ಮಕ್‌ಕಳ ವಿಭಾಗದಲ್‌ಲೂ, ಚಿತ್‌ರಕಲೆಯನ್‌ನು ಗಂಡುಮಕ್‌ಕಳ ವಿಭಾಗದಲ್‌ಲೂ ನಿಗದಿಪಡಿಸಿದ್‌ದರು. ನಾನು ಈ ಎರಡನ್‌ನೂ ಸಾಮಾನ್‌ಯ ವಿಭಾಗಕ್‌ಕೆ ವರ್‌ಗಾಯಿಸಿ, ಶಾಲೆಯ ಎಲ್‌ಲ ಗಂಡು ಮಕ್‌ಕಳು ಮತ್‌ತು ಹೆಣ್‌ಣು ಮಕ್‌ಕಳು ಭಾಗವಹಿಸಲಿ ಎಂದು ವಾದಿಸಿದೆ. ವಿದ್‌ಯಾರ್‌ಥಿ ಸಂಘದ ಗೌರವಾಧ್‌ಯಕ್‌ಷರಾದ ಶಾಲೆಯ ಪ್‌ರಾಂಶುಪಾಲರು "ಚಿತ್‌ರಕಲೆಯನ್‌ನು ಬೇಕಾದರೆ ಸಾಮಾನ್‌ಯ ವರ್‌ಗಕ್‌ಕೆ ಹಾಕಬಹುದು. ರಂಗೋಲಿ ಹೆಣ್‌ಣು ಮಕ್‌ಕಳ ವಿಭಾಗದಲ್‌ಲೇ ಇರಲಿ. ಯಾವ ಹುಡುಗನೂ ರಂಗೋಲಿ ಸ್‌ಪರ್‌ಧೆಯಲ್‌ಲಿ ಭಾಗವಹಿಸಲು ಮುಂದೆ ಬರುವುದಿಲ್‌ಲ" ಎಂದರು. "ಇಲ್‌ಲ, ರಂಗೋಲಿಯೂ ಒಂದು ಕಲೆ. ಸಾಮಾನ್‌ಯ ವಿಭಾಗದಲ್‌ಲಿ ಬರಲಿ" ಎಂದೆ ನಾನು. "ಯಾವ ಹುಡುಗನೂ ಭಾಗವಹಿಸಲು ಮುಂದೆ ಬರದಿದ್‌ದಲ್‌ಲಿ, ನೀನೇ ಭಾಗವಹಿಸಬೇಕು" ಎಂದು ಅಣಕವಾಡಿದರು ಅಧ್‌ಯಕ್‌ಷರು. ನಾನು ಆ ಷರತ್‌ತಿಗೆ ಒಪ್‌ಪಿದೆ. ಚಿತ್‌ರಕಲೆ ಮತ್‌ತು ರಂಗೋಲಿ ಇವೆರಡನ್‌ನೂ ಸಾಮಾನ್‌ಯ ವಿಭಾಗಕ್‌ಕೆ ವರ್‌ಗಾಯಿಸಲಾಯಿತು.
ಪ್‌ರಾಂಶುಪಾಲರ ಅನುಮಾನದಂತೆ ರಂಗೋಲಿ ಸ್‌ಪರ್‌ಧೆಗೆ ಯಾವ ಹುಡುಗನೂ ಮುಂದೆ ಬರಲಿಲ್‌ಲ. ಪ್‌ರಾಂಶುಪಾಲರಿಗೆ ನನ್‌ನ ಹೆಸರನ್‌ನು ರಂಗೋಲಿ ಸ್‌ಪರ್‌ಧೆಗೆ ಸೇರಿಸುತ್‌ತೇನೆ ಎಂದು ತಿಳಿಸಿದೆ; ವಿದ್‌ಯಾರ್‌ಥಿ ಸಂಘದ ಕಾರ್‌ಯದರ್‌ಶಿ ನಾನೇ ತಾನೆ. ಅವರು ನಕ್‌ಕು "ಊಂ, ಸರಿ" ಎಂದರು. ಮಾರನೇ ಭಾನುವಾರ ರಂಗೋಲಿ ಸ್‌ಪರ್‌ಧೆಗೆ ನಿಗದಿಯಾಗಿತ್‌ತು.
ರಂಗೋಲಿ ಸ್‌ಪರ್‌ಧೆಗಾಗಿ ಶಾಲೆಯ ಹಾಲ್‌ಅನ್‌ನು ಅಣಿಮಾಡಿದ್‌ದರು. ಹಾಲಿ ಪೂರ್‌ತಿ ಖಾಲಿ. ಒಟ್‌ಟು ಹತ್‌ತು ಅಂಕಣಗಳನ್‌ನು ಗುರುತುಹಾಕಿದ್‌ದರು. ಸ್‌ಪರ್‌ಧಾರ್‌ಥಿಗಳು ಹತ್‌ತು ಜನ. ಒಂಭತ್‌ತು ಹುಡುಗಿಯರು, ಒಬ್‌ಬನೇ ಹುಡುಗ - ಅದು ನಾನೇ. ಒಂದೊಂದು ಅಂಕಣದಲ್‌ಲೂ ನಾಲ್‌ಕು ಅಡಿ ಅಗಲ ಮತ್‌ತು ಐದು ಆಡಿ ಉದ್‌ದ ಇರುವ ಆಯಗಳನ್‌ನು ಗುರುತಿಸಿದ್‌ದರು ರಂಗೋಲಿಗಳನ್‌ನು ಬಿಡಿಸಲು. ಜೊತೆಗೆ ಪಕ್‌ಕದಲ್‌ಲಿ ರಂಗೋಲಿ ಪುಡಿ ಮತ್‌ತಿತ್‌ತರ ಸಾಮಗ್‌ರಿಗಳನ್‌ನು ಇಟ್‌ಟುಕೊಳ್‌ಳಲು ರಂಗೋಲಿ ಕೆಲಸ ಮಾಡಲು ಜಾಗಗಳಿದ್‌ದವು. ನನಗೆ ಒಂದು ಮೂಲೆಯಲ್‌ಲಿ ಜಾಗ ನಿಗದಿ ಮಾಡಿದ್‌ದರು. ಒಂಭತ್‌ತು ಜನ ಹುಡುಗಿಯರು ಮತ್‌ತು ನಾನು ರಂಗೋಲಿ ಬಿಡಿಸಲು ಸಿದ್‌ಧವಾಗಿದ್‌ದೆವು. ಒಂದು ಘಂಟೆಯ ಕಾಲಾವಧಿ ನಿಗದಿಪಡಿಸಿದ್‌ದರು.ಆಲ್‌ಲಿ ಭಾಗವಹಿಸಲು ಬಂದ ಹುಡುಗಿಯರಿಗೆ ಒಬ್‌ಬ ಹುಡುಗನೂ ಭಾಗವಹಿಸುತ್‌ತಾನೆ ಎಂದು ಗೊತ್‌ತಾದದ್‌ದು ಸ್‌ಪರ್‌ಧೆಯ ಪ್‌ರಾರಂಭದಲ್‌ಲಿಯೇ. ಹುಡುಗಿಯರೆಲ್‌ಲರೂ ಒಬ್‌ಬರನ್‌ನೊಬ್‌ಬರು ನೋಡಿಕೊಂಡು ಮುಸಿಮುಸಿ ನಕ್‌ಕದ್‌ದು ನನಗೆ ಕಾಣಿಸಿತು. ಈ ಹುಡುಗ ಅದೇನು ರಂಗೋಲಿ ಬಿಟ್‌ಟಾನು ಎಂಬ ಕುತೂಹಲ ಅವರಲ್‌ಲಿ ಇದೆ ಎಂದು ನನಗೆ ಅನ್‌ನಿಸಿತು. ಜೊತೆಗೆ ನಮ್‌ಮ ಸಹಪಾಠಿಗಳೂ ಹಾಗೂ ಮೇಷ್‌ಟ್‌ರುಗಳೂ ಇದೇ ಕುತೂಹಲದಲ್‌ಲಿದ್‌ದಾರೆ ಎಂದು ಗೊತ್‌ತಾಗಿದ್‌ದು ಹಾಲ್‌ನ ಕಿಟಕಿಗಳು ಇಣುಕುತ್‌ತಿದ್‌ದ ಇವರ ಮುಖಗಳಿಂದ ತುಂಬಿ ಹೋಗಿದ್‌ದರಿಂದ.
ಸ್‌ಪರ್‌ಧೆ ಪ್‌ರಾರಂಭವಾಯಿತು. ಹುಡುಗಿಯರೆಲ್‌ಲರೂ ಉತ್‌ಸಾಹದಿಂದ ರಂಗೋಲಿ ಬಿಡಿಸಲು ಪ್‌ರಾರಂಭಿಸಿದರು. ನಾಲ್‌ವರು ಚುಕ್‌ಕಿ ರಂಗೋಲಿಗಳನ್‌ನು ಬಿಡಿಸಲು ಆರಂಭಿಸಿದರು. ಇನ್‌ನು ನಾಲ್‌ವರು ಗೆರೆ ಆಧಾರಿತ ರಂಗೋಲಿಗಳನು ಆರಿಸಿಕೊಂಡಿದ್‌ದರು. ಒಬ್‌ಬ ಹುಡುಗಿ ಗಂಡು ನವಿಲಿನ ಚಿತ್‌ರವನ್‌ನು ಮೂಡಿಸಲು ಷುರು ಮಾಡಿದಳು. ಮೊದಲಿಗೆ ಸೀಮೇಸುಣ್‌ಣದಲ್‌ಲಿ ರಂಗೋಲಿಯ ಚಿತ್‌ರವನ್‌ನು ಬಿಡಿಸಿಕೊಂಡು ನಂತರ ರಂಗೋಲಿಯ ಬಣ್‌ಣದ ಪುಡಿಯಿಂದ ಮುಂದುವರಿಸುವ ಕ್‌ರಮವನ್‌ನು ಅನುಸರಿಸುತ್‌ತಿದರು. ಹತ್‌ತು ನಿಮಿಷದ ಹೊತ್‌ತಿಗೆ ಒಂಭತ್‌ತು ಜನ ಹೆಣ್‌ಣು ಮಕ್‌ಕಳು ಬಿಡಿಸುತ್‌ತಿದ್‌ದ ರಂಗೋಲಿಗಳ ಸ್‌ಥೂಲ ಚಿತ್‌ರಣ ಮೂಡುತ್‌ತಿತ್‌ತು.
ನಾನು ರಂಗೋಲಿಗೆ ಮೀಸಲಿರಿಸಿದ್‌ದ ನಾಲ್‌ಕು ಅಡಿ ಅಗಲದ ಮೇಲಿನ ಸುಮಾರು ಎರಡೂವರೆ ಅಡಿ ಎತ್‌ತರದ ಜಾಗಕ್‌ಕೆ ತುಸು ಹಳದಿಯತ್‌ತ ವಾಲುತ್‌ತಿದ್‌ದ ಕೇಸರಿ ಬಣ್‌ಣದ ರಂಗೋಲಿ ಪುಡಿಯಿಂದ ತುಂಬತೊಡಗಿದೆ. ಆನಂತರ ಕೆಳಗಿನ ಒಂದೂವರೆ ಅಡಿ ಸುಮಾರು ಆಯಾಕಾರದ ಉಳಿದ ಜಾಗವನ್‌ನು ಊದಾ ಬಣ್‌ಣದ ರಂಗೋಲಿ ಪುಡಿಯಿಂದ ತುಂಬುತ್‌ತಾ ಬಂದೆ. ಮೇಲಿನ ಅರುಣ ವರ್‌ಣ ಮತ್‌ತು ಕೆಳಗಿನ ಊದಾ ಬಣ್‌ಣಗಳು ಸೇರುವ ಅಂಚು ಸರಳ ರೇಖೆಯಾಗಿರಲ್‌ಲಿಲ್‌ಲ. ಡೊಂಕುಡೊಂಕಾಗಿ ಓರೆಕೋರೆಯಾಗಿತ್‌ತು. ನಾನು ರಂಗೋಲಿ ಬಿಡಿಸುವುದನ್‌ನು ನೋಡುತ್‌ತಿದ್‌ದವರಿಗೆ ಇದೇನು ಮಾಡಿತ್‌ತಿದ್‌ದಾನೆ ಈ ಹುಡುಗ ಎಂದು ಅನ್‌ನಿಸುತ್‌ತಿದ್‌ದಿರಬೇಕು. ಸ್‌ಪರ್‌ಧೆಯಲ್‌ಲಿದ್‌ದ ಒಂಭತ್‌ತು ಜನ ಹೆಣ್‌ಣು ಮಕ್‌ಕಳು ತಾವು ರಂಗೋಲಿ ಬಿಡಿಸುತ್‌ತಾ ಇದ್‌ದು ಉಳಿದವರು ಏನು ರಂಗೋಲಿ ಬಿಡಿಸುತ್‌ತಿದ್‌ದಾರೆ ಎಂದು ನೋಡುತ್‌ತಿದ್‌ದರು. ನಾನು ರಂಗೋಲಿ ಬಿಡಿಸುತ್‌ತಿದ್‌ದುದು ಅವರಿಗೆ ಏನೂ ಅರ್‌ಥವಾಗಿರಲಿಕ್‌ಕಿಲ್‌ಲ ಎಂದು ನನಗೆ ಅನ್‌ನಿಸುತ್‌ತಿತ್‌ತು. ಕಾರಿಡಾರಿನಲ್‌ಲಿ ನಿಂತು ಕಿಟಕಿಯ ಮೂಲಕ ಕುತೂಹಲದಿಂದ ನೋಡಿತ್‌ತಿದ್‌ದವರಿಗೂ ಹಾಗೇ ಅನ್‌ನಿಸಿರಬಹುದು. ಎಲ್‌ಲ ಒಂಭತ್‌ತು ಹೆಣ್‌ಣು ಮಕ್‌ಕಳೂ ರಂಗೋಲಿ ಬಿಡಿಸುತ್‌ತಿದ್‌ದಾರೆ; ಈ ಹುಡುಗ ಇದೇನು ಮಾಡುತ್‌ತಿದ್‌ದಾನೆ ಎಂದು ಅನ್‌ನಿಸಿರಬೇಕು ಅವರಿಗೆ. ಬಳಿಕ ಕಪ್‌ಪು ಬಣ್‌ಣದ ರಂಗೋಲಿ ಪುಡಿಯನ್‌ನು ಉದುರಿಸುತ್‌ತಾ ಮೂರು ತೆಂಗಿನಮರಗಳು ಅತ್‌ತಿತ್‌ತ ಬಾಗಿರುವಂತೆ ನೆರಳುನೆರಳಾಗಿ ಕಾಣುವಂತೆ ಮೂಡಿಸಿದೆ. ಪ್‌ರಖರ ಬೆಳಕು ಹಿಂದಿದ್‌ದಾಗ ಕಾಣುವ ನೆರಳುಚಿತ್‌ರದಂತೆ ಆ ತೆಂಗಿನಮರಗಳು ಕಾಣತೊಡಗಿದವು. (Like silhouette). ಆನಂತರ ಊದಾಬಣ್‌ಣದ ಜಾಗದಲ್‌ಲಿ ಕೇಸರಿ ಬಣ್‌ಣದ ರಂಗೊಲಿ ಪುಡಿ ಉದುರಿಸುತ್‌ತಾ ಅಲ್‌ಲಲ್‌ಲಿ ನೀರಿನ ಅಲೆಗಳನ್‌ನು ಮೂಡಿಸಿದೆ. ಕರಿಯ ಬಣ್‌ಣದ ರಂಗೋಲಿ ಪುಡಿಯನ್‌ನು ಉದುರಿಸುತ್‌ತಾ ಹಾಯಿದೋಣಿಯೊಂದನ್‌ನು ಚಿತ್‌ರಿಸಿದೆ. ಅದೇ ಕರಿಯ ಬಣ್‌ಣದ ರಂಗೋಲಿ ಪುಡಿ ಬಳಸಿ ಅಲ್‌ಲಿ ಇಬ್‌ಬರು ಮೀನುಗಾರರ ನೆರಳಿನ ಚಿತ್‌ರವನ್‌ನೂ ಮೂಡಿಸಿದೆ. ನನ್‌ನ ರಂಗೋಲಿ ಈ ಹಂತಕ್‌ಕೆ ಬರುತ್‌ತಿದ್‌ದಂತೆ ಇದನ್‌ನು ನೋಡುತ್‌ತಿದ ಎಲ್‌ಲರಿಗೂ ನಾನು ಬರೆಯುತ್‌ತಿರುವ ರಂಗೋಲಿಯ ಬಗ್‌ಗೆ ತಿಳಿಯಿತು. ದಿಗಂತದಿಂದ ತುಸು ಮೇಲೆ ಮುಳುಗುತ್‌ತಿರುವ ಸೂರ್‌ಯನನ್‌ನು ಕೇಸರಿ ಬೆರೆತ ಹಳದಿ ಬಣ್‌ಣದಿಂದ ಬಿಡಿಸಿದೆ. ಕರಿ, ಹಳದಿ ಹಾಗೂ ಕೇಸರಿ ಬಣ್‌ಣಗಳನ್‌ನು ಅವಶ್‌ಯಕತೆಗನುಗುಣವಾಗಿ ವಿವಿಧ ಪ್‌ರಮಾಣಗಳಲ್‌ಲಿ ಬಳಸಿ ಆಕಾಶವನ್‌ನು ಮುಳುಗುತ್‌ತಿರುವ ಸೂರ್‌ಯನಿಂದ ದೂರವಾದಂತೆ ಹಂತಹಂತವಾಗಿ ಬದಲಾಗುತ್‌ತಿರುವಂತೆ ರಂಗೋಲಿ ಪುಡಿ ಉದುರಿಸುತ್‌ತಾ, ಸರಿಪಡಿಸುತ್‌ತಾ ಸಮುದ್‌ರ ತೀರದ ಪ್‌ರಕೃತಿಯ ನೆರಳುಚಿತ್‌ರವನ್‌ನು (silhouette) ಮುಗಿಸುವ ಹೊತ್‌ತಿಗೆ ನನ್‌ನ ಒಂದು ಘಂಟೆಯ ಸಮಯ ಮುಗಿಯುತ್‌ತಾ ಬಂದಿತ್‌ತು.
ಸ್‌ಪರ್‌ಧೆಯಲ್‌ಲಿದ್‌ದ ಒಂಭತ್‌ತು ಜನ ಹೆಣ್‌ಣುಮಕ್‌ಕಳಲ್‌ಲಿ ಎಂಟು ಜನ ಹೆಣ್‌ಣು ಮಕ್‌ಕಳು ಸಾಂಪ್‌ರದಾಯಿಕ ರಂಗೋಲಿಗಳನ್‌ನು ಬಹಳ ಚೆನ್‌ನಾಗಿ ಬಿಡಿಸಿದ್‌ದರು. ರಂಗೋಲಿಯ ಒಳಭಾಗಗಳನ್‌ನು ಬಣ್‌ಣ ಬಣ್‌ಣದ ರಂಗೋಲಿ ಪುಡಿಗಳಿಂದ ತುಂಬಿದ್‌ದರು. ರಂಗೋಲಿಯ ಗೆರೆಗಳಿಗೆ ಬಿಳಿಯ ಪುಡಿಯನ್‌ನು ನಾಜೂಕಾಗಿ ಉದುರಿಸಿದ್‌ದರು. ಒಬ್‌ಬ ಹುಡುಗಿ ಗಂಡು ನವಿಲಿನ ಚಿತ್‌ರವನ್‌ನು ಚೆನ್‌ನಾಗಿ ಬಿಡಿಸಿದ್‌ದಳು. ಮರದ ಕೊಂಬೆಯೊಂದರ ಮೇಲೆ ಆ ನವಿಲು ಕುಳಿತಂತೆ ಇತ್‌ತು. ಬಣ್‌ಣಗಳ ಆಯ್‌ಕೆ ಬಹಳ ಸಹಜವಾಗಿತ್‌ತು.
ರಂಗೋಲಿಗಳನ್‌ನು ತಜ್‌ಞರು ನೋಡಿ ಶ್‌ರೇಯಾಂಕಗಳನ್‌ನು ಕೊಡುತ್‌ತಾರೆಂಬುದಾಗಿ ಸ್‌ಪರ್‌ಧೆಯ ಕೊನೆಯಲ್‌ಲಿ ನಮಗೆ ತಿಳಿಸಿದರು. ವಾರ್‌ಷಿಕೋತ್‌ಸವದ ದಿನ ಬಹುಮಾನ ವಿತರಣೆ ಸಂದರ್‌ಭದಲ್‌ಲಿ ವೇದಿಕೆಗೆ ಕರ್‌ನಾಟಕದ ಸುಪ್‌ರಸಿದ್‌ದ ’ಕಲಾಮಂದಿರ’ದ ಸ್‌ಥಾಪಕರೂ ಗುರುಗಳೂ ಆದ ದಿ.ಆ.ನ್.ಸುಬ್‌ಬರಾಯರನ್‌ನು ಬರಮಾಡಿಕೊಂಡ ಪ್‌ರಾಂಶುಪಾಲರು ಹೇಳಿದರು, "ರಂಗೋಲಿ ಸ್‌ಪರ್‌ಧೆಯ ರಂಗೋಲಿಗಳನ್‌ನು ನೋಡಿ ಶ್‌ರೇಯಾಂಕಗಳನ್‌ನು ನಿರ್‌ಣಯಿಸಿದ ತೀರ್‌ಪುಗಾರರು ನಮ್‌ಮ ಶಾಲೆಯ ಪಕ್‌ಕದಲ್‌ಲೇ ಇರುವ ಚಿತ್‌ರಕಲಾ ಶಾಲೆ ’ಕಲಾಮಂದಿರ’ದ ಮಾನ್‌ಯ ಸುಬ್‌ಬರಾಯರು. ಈ ಕುರಿತು ಮಾನ್‌ಯ ಸುಬ್‌ಬರಾಯರು ನಿಮಗೆ ತಿಳಿಸುತ್‌ತಾರೆ."
"ಎಲ್‌ಲ ಸ್‌ಪರ್‌ಧಿಗಳೂ ತುಂಬ ಶ್‌ರಧೆಯಿಂದ ರಂಗೋಲಿ ಬಿಡಿಸಿದ್‌ದಾರೆ. ನಮ್‌ಮಲ್‌ಲಿ ಹೆಣ್‌ಣು ಮಕ್‌ಕಳು ರಂಗೋಲಿ ಬಿಡಿಸುವ ಕಲೆಯಲ್‌ಲಿ ಪರಿಣತಿಯನ್‌ನು ಹೊಂದಿದ್‌ದಾರೆ. ಎಂಟು ಜನ ಹುಡುಗಿಯರು ಸಾಂಪ್‌ರದಾಯಿಕ ರಂಗೋಲಿಗಳನ್‌ನು ಚೆನ್‌ನಾಗಿ ಬಿಡಿಸಿದ್‌ದಾರೆ. ಒಬ್‌ಬ ಹುಡುಗಿ ಇವರಿಗಿಂತ ತುಸು ಭಿನ್‌ನವಾಗಿ ನವಿಲಿನ ಚಿತ್‌ರವನ್‌ನು ಬಿಡಿಸಿದ್‌ದಾಳೆ. ಈ ನವಿಲಿನ ರಂಗೋಲಿ ಬಹಳ ಚೆನ್‌ನಾಗಿ ಬಂದಿದೆ. ಇದಕ್‌ಕೆ ಎರಡನೇ ಸ್‌ಥಾನವನ್‌ನು ಕೊಟ್‌ಟಿದ್‌ದೇನೆ. ಆದರೆ ಈ ಸ್‌ಪರ್‌ಧೆಯಲ್‌ಲಿ ಬಹಳ ಮೆಚ್‌ಚಬಹುದಾದ ಒಂದು ರಂಗೋಲಿ ಎಂದರೆ ಸಮುದ್‌ರ ತೀರದಲ್‌ಲಿ ಸೂರ್‌ಯಾಸ್‌ತದ ನೆರಳುಚಿತ್‌ರ. ಈ ರಂಗೋಲಿ ಸಾಂಪ್‌ರದಾಯಿಕ ರಂಗೋಲಿಗಳಿಗಿಂತ ಬಹಳ ವಿಭಿನ್‌ನವಾದ ಶೈಲಿಯಲ್‌ಲಿ ಪ್‌ರಕೃತಿಚಿತ್‌ರವನ್‌ನು ಮೂಡಿಸಿರುವುದು. ಇದಕ್‌ಕೆ ಮೊದಲನೇ ಸ್‌ಥಾನವನ್‌ನು ಕೊಟ್‌ಟಿದ್‌ದೇನೆ. ಈ ಪ್‌ರಕೃತಿಚಿತ್‌ರವನ್‌ನು ಬಿಡಿಸಿದ ಹುಡುಗಿಯ ವಿಭಿನ್‌ನ ಮತ್‌ತು ವಿನೂತನ ಶೈಲಿ ನನಗೆ ಮೆಚ್‌ಚುಗೆಯಾಯಿತು." ಆಗ ಪ್‌ರಾಂಶುಪಾಲರು ತೀರ್‌ಪುಗಾರರಾಗಿ ಬಂದಿದ್‌ದ ದಿ.ಆ.ನ.ಸುಬ್‌ಬರಾಯರಿಗೆ ಅದು ಒಬ್‌ಬ ಹುಡುಗ ಬಿಡಿಸಿದ್‌ದು ಎಂದು ತಿಳಿಸಿ ನನ್‌ನ ಹೆಸರನ್‌ನು ಕೂಗಿ ನನ್‌ನನ್‌ನು ವೇದಿಕೆಗೆ ಕರೆದರು.

No comments:
Post a Comment