ವಿಜಯಕರ‍್‌ನಾಟಕದಲ್‌ಲಿ ’ಎಲ್‌ಲರ ಕನ್‌ನಡ’ ಕುರಿತು ನನ್‌ನ ಪ್‌ರತಿಕ್‌ರಿಯೆ
ಮೇ ೨೭ರಂದು ’ಎಲ್‌ಲರ ಕನ್‌ನಡ’ ಕುರಿತು ನನ್‌ನ ಪ್‌ರತಿಕ್‌ರಿಯೆ ವಿಜಯಕರ‍್‌ನಾಟಕದಲ್‌ಲಿ ಬಂದಿತ್‌ತು. ಪದಗಳ ಮಿತಿಯಿಂದ ನನ್‌ನ ಪ್‌ರತಿಕ್‌ರಿಯೆಯನ್‌ನು ಕಿರಿದುಗೊಳಿಸಿ ಪ್‌ರಕಟಿಸಲಾಗಿತ್‌ತು. ನನ್‌ನ ಮೂಲ ಒಕ್‌ಕಣೆಯಿಲ್‌ಲಿದೆ: 6-05-2012 ರ ಭಾನುವಾರದಿಂದ ವಿಜಯಕರ್‌ನಾಟಕದ ಸಾಪ್‌ತಾಹಿಕ ವಿಭಾಗ ’ಲವಲವಿಕೆ’ಯಲ್‌ಲಿ ಹೆಸರಾಂತ ಭಾಷಾತಜ್‌ಞ ಡಾ.ಡಿ.ಎನ್.ಶಂಕರಭಟ್‌ಟರ ಅಂಕಣ ’ಎಲ್‌ಲರ ಕನ್‌ನಡ’ ಆರಂಭವಾಗಿರುವುದು ಬಹಳ ಸಂತೋಷದ ವಿಷಯ. ಇದಕ್‌ಕಾಗಿ ವಿಜಯಕರ್‌ನಾಟಕ ಅಭಿನಂದನಾರ್‌ಹ. ಈ ಅಂಕಣದ ಮೊದಲ ಲೇಖನ 'ಬರಹ ಕನ್‌ನಡ ಮತ್‌ತು ಆಡುಗನ್‌ನಡ'ದಲ್‌ಲಿ ಕೆಲವು ಮುಖ್‌ಯ ವಿಷಯಗಳನ್‌ನು ಪ್‌ರಸ್‌ತಾಪಿಸಲಾಗಿದೆ. ಬರಹ ಕನ್‌ನಡವು ಆಡುಗನ್‌ನಡಗಳಿಗೆ ಆದಷ್‌ಟೂ ಹತ್‌ತಿರವಾಗಿರಬೇಕು. ಇದನ್‌ನು ಜನಸಾಮಾನ್‌ಯರು ಸ್‌ವಾಗತಿಸುತ್‌ತಾರೆ. ಆಗ ಬರಹ ಕನ್‌ನಡವನ್‌ನು ಬಳಸುವುದು ಸುಲಭವಾಗಿತ್‌ತದೆ. ಇದನ್‌ನು ಸಾಧಿಸಲು ಮಾಡಬೇಕಾದ ಅಂಶಗಳ ಬಗ್‌ಗೆ ವಿವರಿಸಲಾಗಿದೆ. ಯಾವುದೇ ಭಾಷೆಯ ತನ್‌ನ ಬೆಳವಣಿಗೆಗೆ ಪರಭಾಷೆಗಳಿಂದ ಪದಗಳನ್‌ನು ಅಮದು ಮಾಡಿಕೊಳ್‌ಳುವುದು ಸಹಜ. ಮೃತಭಾಷೆಯಂತಿದ್‌ದ ಹೀಬ್‌ರೂ ಭಾಷೆಯನ್‌ನು ಎಷ್‌ಟರ ಮಟ್‌ಟಿಗೆ ಅಭಿವೃದ್‌ಧಿಗೊಳಿಸಿಲಾಗಿದೆ ಎಂದರೆ ಅದರಲ್‌ಲಿ ವೈದ್‌ಯಕೀಯ, ವಿಜ್‌ಞಾನ ಮತ್‌ತಿತ್‌ತರ ವಿಷಯಗಳನ್‌ನು ಬೋಧಿಸುತ್‌ತಿದ್‌ದಾರೆ ಮತ್‌ತು ರಾಷ್‌ಟ್‌ರಭಾಷೆಯನ್‌ನಾಗಿ ಮಾಡಿಕೊಂಡಿದ್‌ದಾರೆ ಇಸ್‌ರೇಲ್‌ನಲ್‌ಲಿ. ಇದಕ್‌ಕೆ ಮುಖ್‌ಯ ಕಾರಣ ಬೇರೆ ಭಾಷೆಗಳಿಂದ ಮುಕ್‌ತವಾಗಿ ಪದಗಳನ್‌ನು ಅಮದು ಮಾಡಿಕೊಂಡು ತನ್‌ನ ಭಾಷೆಯ ಸೊಗಡಿಗೆ ತಕ್‌ಕಂತೆ ಬಳಸಿಕೊಂಡಿರುವುದು. ಕನ್‌ನಡವೂ ಸಹ ಹಲವಾರು ಪರಭಾಷೆಗಳಿಂದ ಪದಗಳನ್‌ನು ಅಮದು ಮಾಡಿಕೊಂಡು ತನ್‌ನ ಸೊಗಡಿಗೆ ತಕ್‌ಕಂತೆ ಅಳವಡಿಸಿಕೊಳ್‌ಳುತ್‌ತಾ ಶಬ್‌ಧಭಂಡಾರವನ್‌ನು ಬೆಳಸಿಕೊಂಡು ಭೂಯಿಷ್‌ಟವಾಗಿದೆ. ಕೆಲವೊಮ್‌ಮೆ ಅತಿಯಾಯಿತು ಅನ್‌ನಿಸುವಷ್‌ಟರ ಮಟ್‌ಟಿಗೆ ನಡೆದಿದೆ ಪರಭಾಷೆಯ ಪದಗಳ ಅಮದು. ಹೀಗಾದಾಗ ಅದಕ್‌ಕೆ ಪ್‌ರತಿರೋಧಗಳೂ ವ್‌ಯಕ್‌ತವಾಗಿವೆ. ಆಂಡಯ್‌ಯ, ಮಹಾರಂಗಲಿಂಗ ಮೊದಲಾದವರು ಇಂತಹ ಅತಿಯಾದ ಪರಭಾಷಾವ್‌ಯಾಮೋಹಕ್‌ಕೆ ವಿರೋಧವನ್‌ನೂ ವ್‌ಯಕ್‌ತಪಡಿಸಿ, ಕನ್‌ನಡಕ್‌ಕೇ ಆದ್‌ಯತೆಯನ್‌ನು ಕೊಟ್‌ಟಿದ್‌ದಾರೆ. ಭಾಷೆಯ ಪದಸಂಪತ್‌ತು ಹೆಚ್‌ಚಿಸಲು ಮತ್‌ತೊಂದು ಮಾರ್‌ಗವೆಂದರೆ ಕನ್‌ನಡದ್‌ದೇ ಆದ ಪದಗಳ ಆವಿಷ್‌ಕಾರ. ಕನ್‌ನಡದಲ್‌ಲಿ ಇರುವು ಪದಗಳನ್‌ನು ಬಳಸಿ ಕನ್‌ನಡಕ್‌ಕೆ ಹೊಂದುವ ರೀತಿಯಲ್‌ಲಿ ಹೊಸ ಪದಗಳನ್‌ನು ಸೃಷ್‌ಟಿಸುವುದು. ಈ ಪ್‌ರಯತ್‌ನವೂ ನಡೆದೇ ಇದೆ. ಪ್‌ರಸಕ್‌ತದಲ್‌ಲಿ ಕನ್‌ನಡ ಭಾಷೆಯ ಕುರಿತು ಎರಡು ಬಣಗಳನ್‌ನು ಕಾಣಬಹುದು. ಒಂದು ಬಣ ಕನ್‌ನಡ ಭಾಷೆಯ ಅಮದು ಮಾಡಿಕೊಳ್‌ಳುತ್‌ತಿರುವ ಭಾಷೆಗಳಲ್‌ಲಿ ಸಂಸ್‌ಕೃತಕ್‌ಕೆ ಮಾತ್‌ರ ವಿಶೇಷ ಅಕ್‌ಕರೆಯನ್‌ನು ತೋರುತ್‌ತಿದೆ. ಈ ಬಣ ವಿರೋಧಿಸುವುದು ಮಹಾಪ್‌ರಾಣಾಕ್‌ಷರಗಳು, ಋ, ಐ, ಔ, ವಿಸರ್‌ಗ, ಙ, ಞ, ಷಕಾರ, ಅರ್‌ಕಾವತ್‌ತು ಇವುಗಳನ್‌ನು ಬಳಸುವುದು ಬೇಡವೆಂಬ ಸಲಹೆಯನ್‌ನು. ಬರಹ ಕನ್‌ನಡ ಸರಳವಾಗಬೇಕಾದರೆ ಇವುಗಳ ಬಳಕೆ ಬಿಟ್‌ಟುಬಿಡಬೇಕಾಗುತ್‌ತದೆ. ಇನ್‌ನೊಂದು ಬಣ ಇದಕ್‌ಕೆ ಪ್‌ರತಿಯಾಗಿ ಸಂಸ್‌ಕೃತ ಪದಗಳನ್‌ನು ಬಿಟ್‌ಟು ಕನ್‌ನಡ ಪದಗಳನ್‌ನೇ ಬಳಸಲು ಬಯಸುತ್‌ತಿದೆ. ಈಗಾಗಲೇ ಕನ್‌ನಡದಲ್‌ಲಿ ಬಳಕೆಯಲ್‌ಲಿದ್‌ದು ಕನ್‌ನಡದ ಸೊಗಡಿಗೆ ಒಗ್‌ಗಿಕೊಂಡಿರುವ ಪದಗಳನ್‌ನು ಬಹಿಷ್‌ಕರಿಸುವುದು ತರವಲ್‌ಲ, ಕನ್‌ನಡ ಜನತೆ ಸುಲಭವಾಗಿ ಬಳಸುವಂತಹ ಪದಗಳನ್‌ನು ಉಳಿಸಿಕೊಳ್‌ಳುವುದು ಸರಿ, ಅವು ಸಂಸ್‌ಕೃತ ಪದಗಳೇ ಆಗರಲಿ ಬಿಡಲಿ. ಈ ಹೇಳಿಕೆ ಕನ್‌ನಡದ ಕಟ್‌ಟಾ ಅಭಿಮಾನಿಗಳಿಗೆ ಹಿಡಿಸದಿರಬಹುದು; ಆದರೂ ಕನ್‌ನಡತನ್‌ನವನ್‌ನು ಮೈಗೂಡಿಸಿಕೊಂಡಿರುವ ಯಾವುದೇ ಭಾಷೆಯ ಪದಗಳನ್‌ನು ಬಿಟ್‌ಟುಬಿಡುವುದು ಸರಿಯಲ್‌ಲ. ಕ್‌ಲಿಷ್‌ಟವಾದ ಪದಗಳಿಗೆ ಪರ್‌ಯಾಯವಾಗಿ ಸರಳವಾದ ಕನ್‌ನಡ ಪದಗಳನ್‌ನು ಬಳಸಬಹುದು; ಅವಶ್‌ಯವಾದರೆ ಹೊಸ ಪದಗಳನ್‌ನು ಕನ್‌ನಡತನಕ್‌ಕೆ ತಕ್‌ಕಂತೆ ಸೃಷ್‌ಟಿಮಾಡಿಕೊಳ್‌ಳಬೇಕು. ಬರಹ ಕನ್‌ನಡ ಆಡುಗನ್‌ನಡಗಳಿಗೆ ಆದಷ್‌ಟೂ ಹತ್‌ತಿರವಿರಬೇಕು ಎಂಬ ಸಲಹೆ ಸ್‌ವಾಗತಾರ್‌ಹ. ಈ ಬಗ್‌ಗೆ ಗಂಭೀರವಾಗಿ ಯೋಚಿಸಬೇಕು. ಬಾಷೆ ಸಾರ‍್‌ವಜನಿಕರ ಸ್‌ವತ್‌ತು; ಕೇವಲ ಪಂಡಿತರ ಸ್‌ವತ್‌ತಲ್‌ಲ. ಸಂವಹನ ಅದರ ಮುಖ್‌ಯ ಉದ್‌ದೇಶ. ಬಾಷೆ ಬೆಳೆಯಬೇಕಾದರೆ ಅದು ಸರ‍್‌ವತ್‌ರ ಉಪಯೋಗವಾಗಬೇಕು; ಸರ‍್‌ವರ ಮನ್‌ನಣೆ ಗಳಿಸಬೇಕು. ಜೀವನದ ಎಲ್‌ಲ ರಂಗಗಳಲ್‌ಲಿ ಬಳಸಲು ಸಮರ‍್‌ತವಾಗಬೇಕು. ಜನಸಾಮಾನ್‌ಯರ ಬಾಷೆಯಾಗ ಬೇಕಾದರೆ ಬಾಷೆ ಸಾದ್‌ಯವಾದಷ್‌ಟೂ ಸುಲಭವಾಗಬೇಕು, ಸರಳವಾಗಬೇಕು.
No comments:
Post a Comment